ಪ್ರಥಮ ಚಿಕಿತ್ಸೆ - 
ಕಾರಣಾಂತರಗಳಿಂದ ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ವೈದ್ಯಕೀಯ ಸಹಾಯ ಒದಗುವುದರ ಒಳಗೇ ಪ್ರಾಣಾಪಾಯ ಸಂಭವಿಸದಂತೆ, ಪರಿಸ್ಥಿತಿ ಉಲ್ಬಣಿಸದಂತೆ. ಜಟಿಲತೆ ತಲೆದೋರದಂತೆ, ವ್ಯಕ್ತಿಗೆ ಆಯಾಸವಾಗದಂತೆ ಮತ್ತು ಆತನ ಮನೋಧೈರ್ಯ ಉಡುಗದಂತೆ ಯುಕ್ತಕ್ರಮ ಜರಗಿಸುತ್ತ ನೆರವಾಗಿದ್ದುಕೊಂಡು ವೈದ್ಯನಿಗೆ ಅಗತ್ಯಮಾಹಿತಿಗಳನ್ನು ಹೇಳಿಕಳುಹಿಸಿ ಆತ ಬಂದಕೂಡಲೆ ಮುಂದಿನ ವಿಚಾರಗಳನ್ನು ಆತನಿಗೆ ಒಪ್ಪಿಸಿ ಹಿಂದೆ ನಿಲ್ಲುವ ನಡವಳಿಕೆ (ಫಸ್ಟ್ ಏಯ್ಡ್). ಆಪತ್ತಿಗೆ ಒಳಗಾದ ವ್ಯಕ್ತಿಗೆ ಈ ಸೇವೆಯನ್ನು ನೀಡುವ ಪ್ರಥಮ ಚಿಕಿತ್ಸಕನ ಜವಾಬ್ದಾರಿ ವೈದ್ಯನ ಪ್ರವೇಶವಾದ ಕೂಡಲೆ ಮುಗಿದು ಹೋದರೂ ಮುಂದೆ ಬೇಕಾಗಬಹುದಾದ ನೆರವು ಒದಗಿಸಲು ಆತ ಸಿದ್ಧನಾಗಿ ನಿಂತಿರತಕ್ಕದ್ದು. ಪ್ರಥಮ ಚಿಕಿತ್ಸಕನ ಕರ್ತವ್ಯಗಳು ಸ್ಥೂಲವಾಗಿ ವೈದ್ಯವಿಜ್ಞಾನವನ್ನೇ ಅವಲಂಬಿಸಿರುವುವಾದರೂ ಅವನ ಚಿಕಿತ್ಸಾಕ್ರಮಗಳೂ ಸ್ವತ: ವೈದ್ಯನ ಚಿಕಿತ್ಸಾಕ್ರಮಗಳೂ ಏಕಕಾಲದಲ್ಲಿ ಒಂದಕ್ಕೊಂದು ಸಂಘಟ್ಟಿಸುವಂತೆ ಇರಕೂಡದು. ಅಪಘಾತದ ಪರಿಣಾಮವಾಗಿ ಪ್ರಥಮ ಚಿಕಿತ್ಸಕನ ನೆರವು ಬೇಕಾದ ವ್ಯಕ್ತಿಗೆ ದೇಹದ ವಿವಿಧ ಭಾಗಗಳಲ್ಲಿ ತೀವ್ರಗಾಯಗಳಾಗಿರಬಹುದು. ಅಗಾಧವಾಗಿ ರಕ್ತಸ್ರಾವವಾಗುತ್ತಿರಬಹುದು. ಮೂಳೆ ಮುರಿದಿರಬಹುದು. ಈ ಎಲ್ಲ ಪರಿಸ್ಥಿತಿಗಳು ಬೇರೆಯವರ ಇಲ್ಲವೆ ಸ್ವಂತ ಕೈವಾಡದ ಫಲವಾಗಿ ಕಂಡುಬರಬಹುದು. ಹಾಗೂ ಆಕಸ್ಮಿಕವಾಗಿ ಇಲ್ಲವೆ ಉದ್ದೇಶಪೂರ್ವಕವಾಗಿ ಜರಗಿದ ಘಟನೆಯ ಪರಿಣಾಮವಾಗಿರಬಹುದು; ರೋಗದ ಹಾಗೂ ಅದರ ಚಿಕಿತ್ಸೆಯಲ್ಲಿ ಕಾಣಬರುವ ಅನಿರೀಕ್ಷಿತ ಪರಿಸ್ಥಿತಿಯ ಪರಿಣಾಮವಾಗಿಯೂ ಇರಬಹುದು. ಇಂಥ ಅನೇಕ ಪ್ರಸಂಗಗಳಲ್ಲಿ ಪ್ರಥಮ ಚಿಕಿತ್ಸಕ ಯುಕ್ತ ಕ್ರಮಗಳನ್ನು ಅನುಸರಿಸಿ ವ್ಯಕ್ತಿಯ ಪ್ರಾಣವನ್ನೇ ಉಳಿಸಿದ ಸಂದರ್ಭಗಳು ಅಸಂಖ್ಯಾತವಾಗಿವೆ.

	ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ಒದಗಿಸುವ ಮುನ್ನ ಮುಖ್ಯವಾಗಿ ಯಾವ ರೀತಿಯ ನೆರವು ಅಗತ್ಯ ಎನ್ನುವಷ್ಟು ಮಾಹಿತಿಯನ್ನು ತತ್‍ಕ್ಷಣ ಪಡೆಯಬಲ್ಲಷ್ಟು ಚಾಣಾಕ್ಷತೆ ಚಿಕಿತ್ಸಕನಿಗೆ ಇರಬೇಕಾದುದು ಅಗತ್ಯ. ಹಾಗೆಯೇ ಅನೇಕ ವ್ಯಕ್ತಿಗಳಿಗೆ ಒಟ್ಟಿಗೆ ಆಘಾತವಾಗಿದ್ದಾಗ ಯಾರಿಗೆ ಮೊದಲು ಎಂಥ ನೆರವು ಅಗತ್ಯ ಎಂದು ನಿರ್ಧರಿಸಿ ಆ ಕ್ರಮವನ್ನು ಅನುಸರಿಸುವುದೂ ಅವಶ್ಯಕ. ಉಸಿರಾಟ ನಿಂತಿದ್ದರೆ ಇನ್ನೆಲ್ಲ ವಿಷಯಗಳನ್ನೂ ಬಿಟ್ಟು ಅದರ ಚಿಕಿತ್ಸೆಗೇ ಆದ್ಯ ಗಮನ ಕೊಡಬೇಕು. ಬಳಿಕ ಅಗಾಧ ರಕ್ತಸ್ರಾವವಾಗುತ್ತಿರುವುದನ್ನು ನಿಲ್ಲಿಸುವ ಕ್ರಮಕೈಗೊಳ್ಳಬೇಕು. ಆಮೇಲೆ, ಸುಸ್ತು ಧಕ್ಕೆಯ (ಷಾಕ್) ಉಪಚಾರ ಮಾಡಬೇಕು. ತರುವಾಯ ಪೆಟ್ಟಿನಿಂದಾದ ಗಾಯಗಳ ಹಾಗೂ ಸುಟ್ಟಗಾಯಗಳ ಚಿಕಿತ್ಸೆಗೆ ಲಕ್ಷ್ಯಹರಿಸಬೇಕು. ಮುರಿದಮೂಳೆಗಳನ್ನು ಪಟ್ಟಿಗೆ ಬಿಗಿದು ಕಟ್ಟಬೇಕು. ವಿಷಪ್ರಯೋಗವಾಗಿದ್ದರೆ ಅಥವಾ ಹಾವು ಕಡಿದಿದ್ದರೆ ಅದಕ್ಕೆ ತಕ್ಕ ಇಲಾಜು ಮಾಡಬೇಕು.

	ವ್ಯಕ್ತಿಗೆ ಅಗತ್ಯವಾದ ನೆರವು ಏನೆಂಬುದನ್ನು ತಿಳಿದಿರುವಷ್ಟೇ ಪ್ರಧಾನವಾದುದು ಆ ಸಂದರ್ಭದಲ್ಲಿ ಏನನ್ನು ಮಾಡಬಾರದು ಎಂಬುದು ಕೂಡ. ಪ್ರಥಮ ಚಿಕಿತ್ಸಕ ತಾನೇ ಗಾಬರಿಗೊಳ್ಳದೆ ಶಾಂತ ಮನಸ್ಕನಾಗಿ ಕ್ಷಣಿಕ ನಿರ್ಧಾರದಿಂದ  ಏನನ್ನು ಮಾಡಬೇಕು ಮತ್ತು ಎನನ್ನು ಮಾಡಕೂಡದು ಎನ್ನುವ ಇತ್ಯರ್ಥಕ್ಕೆ ಬಂದು ಯುಕ್ತ ಆಚರಣೆಗಳನ್ನು ಕೈಗೊಳ್ಳತಕ್ಕದ್ದು. ತುರ್ತು ಸಂದರ್ಭಗಳಲ್ಲಿ ಮಾಡಬೇಕಾದ ಮತ್ತು ಮಾಡಕೂಡದ ಅರಿವು ಪ್ರಥಮ ಚಿಕಿತ್ಸೆ ಪುಸ್ತಕಗಳನ್ನು (ಅವು ಎಷ್ಟು ಉತ್ಕøಷ್ಟವಾದವಾದರೂ) ಓದುವುದರಿಂದ ಮೂಡಿಬರುವುದಿಲ್ಲ. ಉತ್ತಮವಾದ ಪ್ರಥಮಚಿಕಿತ್ಸಾ ತರಬೇತಿ ಕೇಂದ್ರದಲ್ಲಿ ಶಿಕ್ಷಣ ಪಡೆದು ನುರಿತ ಪ್ರಥಮ ಚಿಕಿತ್ಸಕನ ಕೈಕೆಳಗೆ ಕೆಲಕಾಲ ಕೆಲಸಮಾಡಿ ಅನುಭವ ಪಡೆದರೆ ಮಾತ್ರ ಯುಕ್ತಾಯುಕ್ತ ವಿವೇಚನೆ ಸಾಧ್ಯ. ಅಪಘಾತಕ್ಕೆ ಈಡಾಗಿ ರಸ್ತೆಯಲ್ಲಿ ಬಿದ್ದ ವ್ಯಕ್ತಿಯನ್ನು ಎತ್ತಿ ನಿಲ್ಲಿಸಲೋ ರಸ್ತೆಯ ಪಕ್ಕಕ್ಕೆ ಸಾಗಿಸಲೋ ತತ್‍ಕ್ಷಣ ಪ್ರೇರಣೆ ಆಗುವುದು ಸಾಮಾನ್ಯ. ತಮ್ಮ ಕೈಲಾದ ಸಹಾಯ ಮಾಡೋಣವೆಂದು ಅಂಥ ವ್ಯಕ್ತಿಯ ಸುತ್ತ ಜನ ನೆರೆಯುವುದು ಯಾರೋ ಒಬ್ಬರು ಬಿಸಿಬಿಸಿ ಚಹಾವನ್ನು ಕುಡಿಸುವುದು. ಇನ್ಯಾರೋ ಒಬ್ಬರು ತಣ್ಣೀರನ್ನು ತಂದು (ವ್ಯಕ್ತಿಯ ಜ್ಞಾನತಪ್ಪಿಹೋಗಿದ್ದರೂ) ಕುಡಿಸುವುದು, ಇತ್ಯಾದಿ, ಸಾಧಾರಣವಾಗಿ ಜರಗುವ ಮುಂದಿನ ಕ್ರಮಗಳು. ಉದ್ದೇಶ ಘನವಾದದ್ದೇ ಆಗಿದ್ದರೂ ಇವೆಲ್ಲ ಆ ವೇಳೆ ಮಾಡಬಾರದಂಥವು. ವ್ಯಕ್ತಿಗೆ ಮೂಳೆ ಮುರಿದಿಲ್ಲ ಎಂದು ಖಾತರಿಮಾಡಿಕೊಳ್ಳದೆ ರಸ್ತೆಯಲ್ಲಿ ಗಾಯವಾಗಿ ಬಿದ್ದಿರುವಾತನನ್ನು ಅಲುಗಾಡಿಸಲೇಬಾರದು. ಅನಾವಶ್ಯಕವಾಗಿ ಅಲುಗಾಡಿಸದಿರುವುದೇ ವ್ಯಕ್ತಿಗೆ ಹೆಚ್ಚು ಕ್ಷೇಮ. ಆತನನ್ನು ಬೇರೆಡೆಗೆ ಸಾಗಿಸುವ ಏರ್ಪಾಡುಮಾಡುವ ಬದಲು ರಸ್ತೆಯಲ್ಲಿ ವಾಹನ ಮತ್ತು ಜನ ಸಂಚಾರವನ್ನು ದೂರವಾಗಿಸಬೇಕು (ಡೈವರ್ಟ್ ಟ್ರಾಫಿಕ್) ತಿಳಿಯದವರು ವ್ಯಕ್ತಿಯ ನೆರವಿಗೆ ಬಂದು ಮನಸ್ಸಿಗೆ ತೋಚಿದ ಹಾಗೆ ಮಾಡುವುದಕ್ಕೂ ಗಾಳಿ ಆಡದಂತೆ ಆತನ ಸುತ್ತಜನ ನೆರೆಯುವುದಕ್ಕೂ ಎಡೆಕೊಡಬಾರದು. ಆದರೆ ನೆರೆಯವರಿಂದ ತನಗೆ ಮತ್ತು ವ್ಯಕ್ತಿಗೆ ಆಗಬಹುದಾದ ಸಹಾಯವನ್ನು ಪಡೆಯಲ್ಲು ಪ್ರಥಮಚಿಕಿತ್ಸಕ ಹಿಂಜರಿಯಬಾರದು. ವ್ಯಕ್ತಿಗೆ ನೆರಳಾಗಿರುವಂತೆ ಛತ್ರಿಯನ್ನು ಹಿಡಿಯುವುದಕ್ಕೆ, ಅಗತ್ಯವಾದರೆ ವ್ಯಕ್ತಿಗೆ ಗಾಳಿಹಾಕುವುದಕ್ಕೆ, ಹತ್ತಿರ ದೊರೆಯುವ ಸಲಕರಣೆಗಳನ್ನು ತರಿಸಿಕೊಳ್ಳುವುದಕ್ಕೆ, ಮನೆಯವರಿಗೆ ಮತ್ತು ವೈದ್ಯನಿಗೆ ಯುಕ್ತಸಂದೇಶಗಳನ್ನು ಕಳುಹಿಸಿಕೊಡುವುದಕ್ಕೆ, ಇತ್ಯಾದಿಗಳಿಗೆ, ನೆರೆಯ ಜನರನ್ನು ಬಳಸಿಕೊಳ್ಳಬಹುದು. ಪ್ರಥಮ ಚಿಕಿತ್ಸಕ ಯಾವುದೇ ಸಂದರ್ಭದಲ್ಲೂ ಕಟ್ಟುನಿಟ್ಟಾಗಿ ಹೀಗೆಯೇ ಮಾಡಬೇಕೆಂಬ ವಿಧಾಯಕ ಏನೂ ಇಲ್ಲ. ಮನೆ ಹೊತ್ತಿಕೊಂಡು ಹೊಗೆಯಲ್ಲಿ ಸಿಕ್ಕ ವ್ಯಕ್ತಿ ಉಸಿರುಕಟ್ಟಿಕೊಂಡು ಬಿದ್ದಿದ್ದಾಗ ಅವನನ್ನು ಚಲಿಸಬಾರದೇನೂ ಎನ್ನುವ ಅಂಶವನ್ನು ಯೋಚಿಸುತ್ತ ಕಾಲಹರಣ ಮಾಡುವುದು ತಪ್ಪು ಎಂದು ಹೇಳಬೇಕಾಗಿಲ್ಲವಷ್ಟೆ. ಸಂದರ್ಭೋಚಿತವಾಗಿ ಏನು ಮಾಡಿದರೆ ಮತ್ತು ಏನನ್ನು ಮಾಡದೆ ಬಿಟ್ಟರೆ ವ್ಯಕ್ತಿಗೆ ಹೆಚ್ಚು ಕ್ಷೇಮ ಎಂದು ನಿರ್ಧರಿಸಿ ಹಾಗೆ ಮಾಡತಕ್ಕದ್ದು. ಉದಾಹರಣೆಗೆ ಗಾಯಗಳಿಂದ ಸ್ವಲ್ಪ ರಕ್ತ ಹೊಮ್ಮುತ್ತಿದ್ದರೆ ಹುಡಿಮಣ್ಣು, ಕುಂಕುಮ ಇತ್ಯಾದಿಗಳನ್ನು ಇಲ್ಲವೆ ಬಟ್ಟೆಯಿಂದ ಒತ್ತುವುದು ಇಂಥವನ್ನು ಮಾಡಬಾರದು ಎಂದು ತಿಳಿದುಕೊಂಡಿದ್ದರೆ ಸಾಲದು. ಬೇರೆ ಗಂಭೀರ ಪರಿಸ್ಥಿತಿಗಳಿರುವಾಗ ಇಂಥ ಅಲ್ಪ ರಕ್ತಸ್ರಾವವನ್ನು ನಿಲ್ಲಿಸುವುದಕ್ಕೇ ಹೋಗಬಾರದು. ಕೆಲವೇ ಮಿನಿಟುಗಳಲ್ಲಿ ಅದು ತಾನಾಗಿಯೇ ನಿಂತುಹೋಗುತ್ತದೆ. ಆದ್ದರಿಂದ ಇದು ಅಗಣನೀಯ ಎಂದೂ ತಿಳಿದಿರಬೇಕು. ಆದರೆ ಒಂದೇ ಸಮನೆ ರಕ್ತ ಹರಿದುಹೋಗುತ್ತಿದ್ದರೆ ಅದನ್ನು ನಿಲ್ಲಿಸಲು ಯುಕ್ತ ಕ್ರಮವನ್ನು ಜರೂರಾಗಿ ಕೈಗೊಳ್ಳಲೇಬೇಕು. ವ್ಯಕ್ತಿಗೆ ಉಸಿರಾಟ ನಿಂತಿದ್ದಾಗ ಮೊತ್ತಮೊದಲ ಕ್ರಮವಾಗಿ ಕೃತಕ ಉಸಿರಾಟ ಮಾಡಿಸಲು ಪ್ರಾರಂಭಿಸಬೇಕು. ಅದರ ಬದಲು ಮೊದಲು ರಕ್ತಸ್ರಾವ ಚಿಕಿತ್ಸೆಗೆ ತೊಡಗಬಾರದು. ಜ್ಞಾನತಪ್ಪಿದ ವ್ಯಕ್ತಿಗೆ ಸರ್ವಥಾ ಏನನ್ನೂ ಕುಡಿಸುವುದಕ್ಕೆ ಹೋಗಬಾರದು. ಹಾಗೆ ಮಾಡುವುದು ವ್ಯಕ್ತಿಗೆ ಮಾರಕವೇ ಆದೀತು. ಆದರೆ ಇದಕ್ಕೆ ಒಂದೇ ಒಂದು ವಿನಾಯಿತಿ ಇರುವುದನ್ನು ಮನಸ್ಸಿನಲ್ಲಿ ಇಟ್ಟಿರಬೇಕು. ಮಧುಮೂತ್ರದಿಂದ ನರಳುತ್ತಿರುವ ವ್ಯಕ್ತಿ ಚಿಕಿತ್ಸೆಗಾಗಿ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಂಡಾಗ ಅದರ ಪ್ರಭಾವ ಅಕಸ್ಮಾತ್ ಮಿತಿಮೀರಿ ವ್ಯಕ್ತಿ ಜ್ಞಾನತಪ್ಪಿ ಬಿದ್ದುಬಿಡಬಹುದು. ದೊರೆತ ಮಾಹಿತಿಗಳಿಂದ ಸಂದರ್ಭ ಇಂಥದೇ ಎಂದು ಖಾತರಿ ಆದರೆ ಆಗ ಮೂರ್ಛಾಗತ ವ್ಯಕ್ತಿಗೆ ಸಕ್ಕರೆ ನೀರನ್ನು ಬಲವಂತವಾಗಿ ಕುಡಿಸಬೇಕು. ವಾಸ್ತವವಾಗಿ ವ್ಯಕ್ತಿಯ ಪ್ರಾಣ ಉಳಿಸುವ ಮಾರ್ಗ ಆ ಕ್ಷಣದಲ್ಲಿ ಇದೊಂದೇ.

	ಯಾವುದೋ ಸಂದರ್ಭದಲ್ಲಿ ತಕ್ಕ ಸಲಕರಣೆ ಇಲ್ಲ ಎಂದು ಪ್ರಥಮ ಚಿಕಿತ್ಸಕ ಅಗತ್ಯ ಕ್ರಮ ಕೈಗೊಳ್ಳುವುದನ್ನು ಬಿಡಬಾರದು. ಸ್ಥಳದಲ್ಲೆ ದೊರೆಯಬಹುದಾದ ಸೌಕರ್ಯಗಳನ್ನು ಒದಗಿಸಿಕೊಂಡು ವ್ಯಕ್ತಿಗೆ ಅಗತ್ಯ ನೆರವನ್ನು ಕೊಡಬೇಕು. ಮೂಳೆ ಮುರಿದಿದ್ದಾಗ ಕಟ್ಟಲು ಪಟ್ಟಿ (ಸ್ಪ್ಲಿಂಟ್) ಇಲ್ಲವೆಂದು ಸುಮ್ಮನಿರಬಾರದು. ದೊಣ್ಣೆಯೋ ದಪ್ಪರಟ್ಟೋ ಕಾಗದದ ಗಟ್ಟಿ ಸುರುಳಿಯೋ ಛತ್ರಿಯೋ ಏನನ್ನಾದರೂ ದೊರಕಿಸಿಕೊಳ್ಳಬೇಕು. ಗಾಯಕ್ಕೆ ಕಟ್ಟಲು ಸ್ವಚ್ಛ ಕಟ್ಟು ಬಟ್ಟೆ ಇಲ್ಲದಿದ್ದರೆ ಬಿಳಿ ಬಟ್ಟೆಯನ್ನು ಶುಭ್ರವಾಗಿ ಸಾಬೂನಿನಿಂದ ತೊಳೆದು ಇಸ್ತ್ರಿಮಾಡಿ ಒಣಗಿಸಿ ಉಪಯೋಗಿಸಬೇಕು. ವ್ಯಕ್ತಿಯನ್ನು ಸಾಗಿಸಲು ಸಾಗುಮಂಚ (ಸ್ಟ್ರೆಚರ್) ಇಲ್ಲವೆಂದು ಕುಳಿತುಕೊಳ್ಳಬಾರದು. ಕದವೋ ಹಲಗೆಯೋ ಏಣಿಯೋ ಯಾವುದಾದರೂ ದೊರೆಕುತ್ತದೆಯೇ ಎಂದು ನೋಡಬೇಕು. ಹೀಗೆ ಲಭ್ಯ ಸಲಕರಣೆಗಳಿಂದ ಅಗತ್ಯ ನೆರವನ್ನು ಚಾಕಚಕ್ಯವಾಗಿಯೂ ದಕ್ಷವಾಗಿಯೂ ನೀಡಬೇಕೆನ್ನುವುದು ಪ್ರಥಮ ಚಿಕಿತ್ಸಕನ ಹೆಗ್ಗುರಿ ಆಗಿರಬೇಕು.

	ಅಪಘಾತ ಅಥವಾ ಆಕಸ್ಮಿಕ ಘಟನೆಯ ನಿರ್ವಹಣೆ ತನ್ನ ಅರಿವಿಗೆ ಮತ್ತು ಅಳವಿಗೆ ಮೀರಿದ್ದು ಎನಿಸಿದ ಕೂಡಲೆ ಪ್ರಥಮ ಚಿಕಿತ್ಸಕ ಚಿಕಿತ್ಸಾಕ್ರಮವನ್ನು ಬೇರೆಯವರಿಗೆ ಒಪ್ಪಿಸಲು ಹಿಂಜರಿಯಲೇ ಕೂಡದು. ಪ್ರಥಮ ಚಿಕಿತ್ಸೆ ಪ್ರಯೋಜನವಿಲ್ಲ. ವ್ಯಕ್ತಿಗೆ ಮರಣಪ್ರಾಪ್ತಿ ಖಾತರಿ ಎಂದು ಪ್ರಥಮ ಚಿಕಿತ್ಸಕ ಎಂದೂ ಹಿಂದೇಟು ಹೊಡೆಯಬಾರದು. ಚಿಕಿತ್ಸಾಕ್ರಮವನ್ನು ಕೈಬಿಡಬಾರದು. ಚಿಕಿತ್ಸಾ ಕ್ರಮ ನಿರರ್ಥಕ ಎಂದು ನಿರ್ಧರಿಸುವಾತ ವೈದ್ಯ, ಪ್ರಥಮ ಚಿಕಿತ್ಸಕ ಅಲ್ಲ. ಅವನು ಬರುವತನಕ ಪ್ರಥಮ ಚಿಕಿತ್ಸೆಯನ್ನು ಮುಂದುವರಿಸಲೇಬೇಕಾದುದು ಪ್ರಥಮ ಚಿಕಿತ್ಸಕನಿಗೆ ಕಡ್ಡಾಯ.

	ಅಪಘಾತ ಅಥವಾ ಆಕಸ್ಮಿಕ ಘಟನೆಯ ಗತವೃತ್ತಾಂತವನ್ನು (ಹಿಸ್ಟರಿ) ಅಂದರೆ ಅದರ ಹಿನ್ನೆಲೆ ಮತ್ತು ಕಾರಣಗಳನ್ನು ಪ್ರಥಮ ಚಿಕಿತ್ಸಕ ಗ್ರಹಿಸಿದರೆ ಉಪಾಧಿ ಏನೆಂದು ನಿರ್ಧರಿಸಲು ಅನುಕೂಲ. ಉದಾಹರಣೆಗೆ ಘಟನೆ ನಡೆದಿರುವ ಆವರಣ (ಮನೆ, ರಸ್ತೆ, ಕೃಷಿಭೂಮಿ, ಕಾಡು, ಜಲಾಸರೆ ಇತ್ಯಾದಿ), ವಾಹನಗಳು, ಪ್ರಾಣಿಗಳು, ಆಯುಧಗಳು, ಸಂದೇಶವನ್ನು ಗುರುತಿಸಿರಬಹುದಾದ ಕಾಗದ ಮತ್ತು ಇತರ ಸಂಕೇತಗಳು, ಕಾಗದದ ಪೊಟ್ಟಣ ಹಾಗೂ ಬಾಟಲಿಗಳು ಇವುಗಳಿಂದ ಮತ್ತು ಘಟನೆಯನ್ನು ವೀಕ್ಷಿಸಿದವರಿಂದ ವಿಷಯಗಳನ್ನು ತಿಳಿಯಲು ಯತ್ನಿಸಬೇಕು. ವ್ಯಕ್ತಿಯನ್ನು ಪರೀಕ್ಷಿಸಿ ಪತ್ತೆಮಾಡಿದ ಚಿಹ್ನೆಗಳಿಂದ (ಸೈನ್ಸ್-ಉದಾಹರಣೆಗೆ ವ್ಯಕ್ತಿ ಜ್ಞಾನತಪ್ಪಿರುವುದು, ಅಕ್ರಮವಾಗಿ ಉಸಿರಾಡುವುದು, ತುಂಬ ಬಿಳಿಚಿಕೊಂಡಿರುವುದು ಇಲ್ಲವೆ ನೀಲಿಗಟ್ಟಿರುವುದು, ಬಾಯಲ್ಲಿ ನೊರೆ, ಅಂಗಭಂಗಿಗಳು ವಿಕಾರವಾಗಿರುವುದು ಕೈಕಾಲು ಜಜ್ಜಿಹೋಗಿರುವುದು. ಅಗಾಧ ರಕ್ತಸಾವ್ರವಾಗುತ್ತಿರುವುದು ಮುಂತಾಗಿ ವ್ಯಕ್ತಿಪರೀಕ್ಷೆಯಿಂದ ತಿಳಿದುಬರುವ ವಿಷಯಗಳು) ಹಾಗೂ ವ್ಯಕ್ತಿ ವಿವರಿಸುವ ಲಕ್ಷಣಗಳಿಂದ (ಸಿಂಪ್ಟಂಸ್-ಉದಾಹರಣೆಗೆ ತಲೆಸುತ್ತು, ಕಣ್ಣುಕತ್ತಲೆ) ಸುಸ್ತು, ವಾಕರಿಕೆ ನೋವು ಮುಂತಾಗಿ ವ್ಯಕ್ತಿಯ ಅನುಭವಕ್ಕೆ ಬರುವ ವಿಷಯಗಳು. ಪರಿಸ್ಥಿತಿ ಏನು ಎಂದೂ ವ್ಯಕ್ತಿಗೆ ಎಂಥ ನೆರವು ಅಗತ್ಯ ಎಂದೂ ನಿರ್ಧರಿಸಬಹುದು. ವ್ಯಕ್ತಿಯನ್ನು ಪ್ರಶ್ನಿಸಿ ಮತ್ತು ಪರೀಕ್ಷಿಸಿ ವಿಚಾರ ತಿಳಿದುಕೊಳ್ಳುವಾಗ ಹಾಗೂ ಮುಕ್ತಕ್ರಮಕ್ಕಾಗಿ ಸಿದ್ಧತೆಮಾಡಿಕೊಳ್ಳುವಾಗ ಆತ ಗಾಬರಿ ಆಗದಂತೆ ಕೌಶಲದಿಂದ ವರ್ತಿಸತಕ್ಕದ್ದು. ಆದರೆ ತತ್‍ಕ್ಷಣ ಕ್ರಮ ಜರಗಿಸಬೇಕಾದ ಸಂದರ್ಭಗಳಲ್ಲಿ ಇವನ್ನೆಲ್ಲ ವಿಶದವಾಗಿ ವಿಚಾರಮಾಡುತ್ತ ಕಾಲಹರಣ ಮಾಡಬಾರದು. ಉದಾಹರಣೆಗೆ ವ್ಯಕ್ತಿಯ ಕುತ್ತಿಗೆಗೆ ನೇಣುಬಿದ್ದಿದ್ದಾಗ ಪೊಲೀಸರಿಗೆ ಹೇಳಿಕಳುಹಿಸುವುದಕ್ಕೂ ಮೊದಲು ವ್ಯಕ್ತಿಯನ್ನು ಎತ್ತಿಹಿಡಿದು ಹಗ್ಗವನ್ನು ಕೊಯ್ದುಹಾಕಿ ಕೆಳಗೆ ಮಲಗಿಸಬೇಕು. ವೈದ್ಯನಿಗೂ ಪೊಲೀಸರಿಗೂ ಹೇಳಿಕಳುಹಿಸುವುದು ಅನಂತರ. ವಿದ್ಯುದಾಘಾತದಲ್ಲಿ ತತ್‍ಕ್ಷಣ ವಿದ್ಯುತ್ಸಂಪರ್ಕ ಕಡಿಯುವಂತೆ ಮಾಡಬೇಕು. ಗಂಟಲಿನಲ್ಲಿ ಏನಾದರೂ ಸಿಕ್ಕಿಹಾಕಿಕೊಂಡು ಉಸಿರಾಟ ಕಷ್ಟವಾಗಿದ್ದಾಗ ಆಚರಣೆಮಾಡುತ್ತಿರುವ ವಸ್ತುವನ್ನು ಒಡನೆ ತೆಗೆದುಹಾಕಬೇಕು. ಇತ್ಯಾದಿ.

	ಈ ಕೆಳಗೆ ಕೆಲವು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸಕ ಒದಗಿಸಬೇಕಾದ ನೆರವನ್ನು ಇನ್ನೂ ಹೆಚ್ಚು ತಪಶೀಲಾಗಿ ವಿವರಿಸಿದೆ.

	1 ಉಸಿರು ಕಟ್ಟಿರುವುದು: ನೀರಿನೊಳಗೆ ಮುಳುಗಿದ್ದರಿಂದ, ಕುತ್ತಿಗೆಗೆ ನೇಣು ಬಿಗಿದಿರುವುದರಿಂದ, ವಿದ್ಯುದಾಘಾತದಿಂದ, ದಟ್ಟ ಹೊಗೆ ಹಾಗೂ ವಿಷಾನಿಲಗಳನ್ನು ಉಸಿರಾಡಿರುವುದರಿಂದ, ಗಂಟಲಿನಲ್ಲಿ ಏನಾದರೂ ವಸ್ತು (ಸ್ವತ: ವ್ಯಕ್ತಿಯ ನಾಲಿಗೆಯೇ ಆಗಿರಬಹುದು) ಇದ್ದು ಉಸಿರಾಟಕ್ಕೆ ಅಡಚಣೆ ಆಗಿರುವುದರಿಂದ ವ್ಯಕ್ತಿಗೆ ಉಸಿರು ಕಟ್ಟಿರಬಹುದು. ನೇಣು, ಅಡಚಣೆಗಳನ್ನು ತತ್‍ಕ್ಷಣವೇ ನಿವಾರಿಸಬೇಕು. ವಿದ್ಯುತ್ಸಂಪರ್ಕ ಇದ್ದರೆ ಅದನ್ನು ಕಡಿಯಬೇಕು. ವ್ಯಕ್ತಿಯನ್ನು ಘಟನೆ ನಡೆದ ಸ್ಥಳದಿಂದ ಕ್ಷೇಮಸ್ಥಳಕ್ಕೆ ಸಾಗಿಸಬೇಕಾದರೆ, ತಕ್ಕ ಎಚ್ಚರಿಕೆ ತೆಗೆದುಕೊಂಡು ಸಾಗಿಸಿ ಆತ ಕೃತಕವಾಗಿ ಉಸಿರಾಡುವಂತೆ ಮಾಡಬೇಕು. ಮುಖ್ಯವಾಗಿ ಯಾವ ರೀತಿಯ ಅನಾವಶ್ಯಕ ವಿಳಂಬವನ್ನೂ ಮಾಡದೆ ಕೃತಕ ಉಸಿರಾಟ ಪ್ರಾರಂಭಿಸತಕ್ಕದ್ದು. (ನೋಡಿ- ಕೃತಕ-ಉಸಿರಾಟ)

	2 ಅಗಾಧ ರಕ್ತಸ್ರಾವ: ಅಪಘಾತವಾದಾಗ ರಕ್ತಸ್ರಾವ ಸಾಮಾನ್ಯವಾಗಿ ಆಗಿಯೇ ಆಗುತ್ತದೆ. ಗಾಯಗಳಿಂದೆ ರಕ್ತ ಜಿನುಗಬಹುದು. ನಿಧಾನವಾಗಿ ಹರಿಯಬಹುದು, ಚಿಮ್ಮಿ ಚಿಮ್ಮಿ ಪ್ರವಹಿಸಬಹುದು. ಲೋಮನಾಳಗಳು, ಅಭಿಧಮನಿಗಳು ಮತ್ತು ಅಪಧಮನಿಗಳ ವಿಚ್ಛೇದನೆಯಿಂದ ಅನುಕ್ರಮವಾಗಿ ಇಂಥ ರಕ್ತಸ್ರಾವಗಳಾಗುತ್ತವೆ. ಗಾಯದ ಮೇಲೆ ಶುಭ್ರವಸ್ತ್ರವನ್ನಿಟ್ಟು ಬಲವಾಗಿ ಒತ್ತಿ ನಾಲ್ಕಾರು ಮಿನಿಟುಗಳು ಹಿಡಿದಿದ್ದರೆ ಅಲ್ಪ ರಕ್ತಸ್ರಾವಗಳನ್ನು ನಿಲ್ಲಿಸಬಹುದು. ಧಾರಾಕಾರವಾಗಿ ರಕ್ತ ಹರಿದು ಹೋಗುತ್ತಿದ್ದರೆ ಗಾಯದ ಮುಂಬದಿಯಲ್ಲಿ ಅಂದರೆ ಗುಂಡಿಗೆಗೆ ದೂರವಾಗಿ ದಿಕ್ಕಿನಲ್ಲಿ ಅಂಗವನ್ನು ಬಲವಾಗಿ ಒತ್ತಿ ಹಿಡಿದು ರಕ್ತಸ್ರಾವವನ್ನು ತಡೆಗಟ್ಟಬಹುದು. ರಕ್ತ ಚಿಮ್ಮಿ ಚಿಮ್ಮಿ ಹರಿಯುತ್ತಿರುವಾಗ (ಇದು ಅಪಧಮನಿಯ ರಕ್ತಸ್ರಾವ) ಅದನ್ನು ತಡೆಗಟ್ಟಲು ಗಾಯದ ಹಿಂಬದಿಯಲ್ಲಿ ಅಂದರೆ ಗುಂಡಿಗೆಗೆ ಹತ್ತಿರವಾದ ದಿಕ್ಕಿನಲ್ಲಿ ಸ್ಥಳೀಯವಾಗಿ ಸಿಕ್ಕುವ ನಾಡಿಯನ್ನು ಒತ್ತಿ ಹಿಡಿದಿರಬೇಕು. ರಕ್ತಸ್ರಾವವನ್ನು ನಿಲ್ಲಿಸಲು ಕೈಕಾಲುಗಳನ್ನು ಹುರಿ ಅಥವಾ ರಬ್ಬರ್ ಪಟ್ಟಿಯಿಂದ ಬಿಗಿಯಕೂಡದು.

	ರಬ್ಬರ್ ಪಟ್ಟಿಯನ್ನು ಬಿಗಿದು ಉದ್ದೇಶಪೂರ್ವಕವಾಗಿ ರಕ್ತಸ್ರಾವ ಮಾಡಿಸುವುದು ಒಂದೇ ಪ್ರಸಂಗದಲ್ಲಿ :ವಿಷ ಹಾವು ಕಡಿದಾಗ. ವ್ಯಕ್ತಿ ನೋವು, ಉರಿ, ಎಂದು ಹೇಳುವಸ್ಥಳದಲ್ಲಿ ರಕ್ತ ಜಿನುಗುತ್ತಿರಬಹುದಾದ ಹಾಗೂ ಪರಸ್ಪರ ಹತ್ತಿರವೇ ಇರುವ ಎರಡು ರಂಧ್ರಗಳು ಇರುವುದರಿಂದ ಮತ್ತು ಇತರ ಮಾಹಿತಿಗಳಿಂದ ವಿಷಹಾವು ಕಡಿತದ ಪ್ರಸಂಗವೆಂದು ಮನದಟ್ಟಾದಾಗ ರಂಧ್ರಗಳ ಹಿಂಬದಿಯಲ್ಲಿ ಅಂದರೆ ಗುಂಡಿಗೆಗೆ ಹತ್ತಿರವಾದ ದಿಕ್ಕಿನಲ್ಲಿ ಹುರಿ ಅಥವಾ ರಬ್ಬರ್ ಪಟ್ಟಿಯನ್ನು ಬಿಗಿದು ರಂಧ್ರಗಳ ಸ್ಥಳದಲ್ಲಿ ಚಾಕುವಿನಿಂದ ಎರಡು ಮೂರು ಕಡೆ ಕೊಯ್ದು ಧಾರಾಳವಾಗಿ ರಕ್ತ ಹರಿದು ಹೋಗುವಂತೆ ಮಾಡಬೇಕು. ಪ್ರಥಮ ಚಿಕಿತ್ಸಕ ತನ್ನ ಬಾಯಿ. ತುಟಿ ಹಾಗೂ ಹಲ್ಲುಗಳಲ್ಲಿ ಏನೂ ಗಾಯವಿಲ್ಲದಿದ್ದಾಗ ಈ ಸ್ಥಳದಿಂದ ಊರುವ ರಕ್ತವನ್ನು ಹೀರಿ ಹೀರಿ ಉಗಿದು ಬಿಡುವುದು ಇನ್ನೂ ಒಳ್ಳೆಯದು. ಮೊಲೆಹಾಲು ಹೀರುವ ಪಂಪು (ಬ್ರೆಸ್ಟ್‍ಪಂಪ್) ಸಿಕ್ಕುವಂತಿದ್ದರೆ ಅದನ್ನು ಬಳಸುವುದು ಸರ್ವ ಶ್ರೇಷ್ಠ. ತರುವಾಯ ಬಿಗಿಪಟ್ಟಿಯನ್ನು ತೆಗೆದುಹಾಕಿ ಸ್ಥಳವನ್ನು ಕ್ರಿಮಿನಾಶಕ ದ್ರಾವಣದಿಂದ ತೊಳೆದು ಬಳಿಕ ಕ್ರಿಮಿನಾಶಕಪುಡಿಯನ್ನು ಹಾಕಿ ಹತ್ತಿ ಮತ್ತು ಪಟ್ಟಿಗಳಿಂದ ಗಾಯವನ್ನು ಬಂಧಿಸಿ ಮುಂದಿನ ತಜ್ಞಚಿಕಿತ್ಸೆಗೆ ಸಾಗಿಸಬೇಕು. ಹಲ್ಲಿನಿಂದ ರಕ್ತ ಸ್ರಾವವಾಗುತ್ತಿದ್ದರೆ ಹತ್ತಿಯನ್ನು ಆ ಸ್ಥಳದಲ್ಲಿ ಇಟ್ಟು ಬಿಗಿಯಾಗಿ ಕಚ್ಚಿಕೊಳ್ಳುವಂತೆ ಹೇಳಬೇಕು. ಮೂಗಿನಹೊಳ್ಳೆ ಒಡೆದು ರಕ್ತಸ್ರಾವವಾಗುತ್ತಿದ್ದರೆ ವ್ಯಕ್ತಿಯನ್ನು ಕೂರಿಸಿ ಮೂಗನ್ನು ಭದ್ರವಾಗಿ ಹಿಡಿದಿರಬೇಕು. ಮೂಗನ್ನು ಶೀಟಬಾರದು.

	3 ಸುಸ್ತುಧಕ್ಕೆ (ಷಾಕ್): ಇದು ದೇಹಕ್ರಿಯೆಗಳೆಲ್ಲ ದುರ್ಬಲಗೊಂಡಿರುವಂಥ ಹಾಗೂ ರಕ್ತ ಪರಿಚಲನೆ ಕ್ರಮೇಣ ಜಡವಾಗುತ್ತ ಬರುವಂಥ ಒಂದು ತೀವ್ರ ಪರಿಸ್ಥಿತಿ. ಅಪಘಾತದ ಪರಿಣಾಮಗಳಾದ ಸಹನಾತೀತ ನೋವು. ಅಗಾಧ ರಕ್ತಸ್ರಾವ, ಅನೇಕ ಸ್ಥಳಗಳಲ್ಲಿ ಮೂಳೆ ಮುರಿದಿರುವುದು. ಕೈಕಾಲುಗಳು ಜಜ್ಜಿಹೋಗಿರುವುದು-ಇವು ಸುಸ್ತುಧಕ್ಕೆಗೆ ಕಾರಣಗಳು. ಮೈಸುಟ್ಟಿರುವುದು, ವಿದ್ಯುದಾಘಾತ, ಉಷ್ಣಾಘಾತ, ಇತ್ಯಾದಿ ಪ್ರಸಂಗಗಳಲ್ಲೂ ಸುಸ್ತುಧಕ್ಕೆ ಕಂಡುಬರುತ್ತದೆ. ಮೈ, ಹಣೆ ಮುಂತಾದ ಸ್ಥಳಗಳು ಬೆವೆತು ಅಂಟಂಟಾಗಿ ಇರುವುದು. ಮುಖ ಕಳೆಗುಂದಿ ಬಿಳಿಚಿಕೊಂಡಿರುವುದು (ಘಾಸ್ಟ್ಲಿ ಫೇಸ್), ದುರ್ಬಲನಾಡಿ, ಲಘು ಹಾಗೂ ವೇಗ ಉಸಿರಾಟ-ಇವು ಸುಸ್ತುಧಕ್ಕೆಯ ಲಕ್ಷಣಗಳು. ಅನೇಕ ವೇಳೆ ವ್ಯಕ್ತಿಗೆ ಜ್ಞಾನ ತಪ್ಪಿರುವುದೇ ಇಲ್ಲ. ಸಹಾಯಕ್ಕೆ ಎಂದು ಬಂದವರು ಏನು ಮಾಡಿ ತನಗೆ ಇನ್ನೂ ಹೆಚ್ಚು ಬಾಧೆ ಉಂಟುಮಾಡುವರೋ ಎಂದು ಭಯಗ್ರಸ್ತನಾಗಿರುವುದೂ (ಅಪ್ರೆಹೆನ್‍ಸಿವ್) ಬಾಯಾರಿಕೆ ಎಂದು ಹೇಳಿ ಪದೇ ಪದೇ ನೀರು. ಕಾಫಿ, ಟೀ ಕುಡಿಯುತ್ತ ಮುನ್ಸೂಚನೆಯೇ ಇಲ್ಲದೆ ಪದೇ ಪದೇ ಅವನ್ನು ವಮನ ಮಾಡುವುದೂ ಸುಸ್ತುಧಕ್ಕೆ ಪರಿಸ್ಥಿತಿಯಲ್ಲಿ ಕಂಡುಬರುತ್ತವೆ. ಶ್ವಾಸಸ್ತಂಭನ ಮತ್ತು ಅಗಾಧ ರಕ್ತಸ್ರಾವದ ಕಡೆ ಗಮನ ಮುಗಿದ ಕೂಡಲೇ ಸುಸ್ತುಧಕ್ಕೆಗೆ ಗಮನ ನೀಡಲೇಬೇಕು. ವಿನಾಕಾರಣ ಕಾಲವಿಳಂಬ ಮಾಡಬಾರದು. ಕಾಲ ಕಳೆದಂತೆ ಸುಸ್ತುಧಕ್ಕೆ ಪರಿಸ್ಥಿತಿ ಒಂದು ವಿಷಮಘಟ್ಟ ಮುಟ್ಟುತ್ತದೆ. ಹೀಗಾಯಿತೆಂದರೆ ಸುಸ್ತುಧಕ್ಕೆ ಚಿಕಿತ್ಸಾತೀತವಾಗುವುದಲ್ಲದೆ ಮಾರಕವಾಗಿಯೂ ಪರಿಣಮಿಸಬಹುದು. ಆದ್ದರಿಂದ ಅಗತ್ಯವಿಲ್ಲದಿದ್ದರೆ ವ್ಯಕ್ತಿಯನ್ನು ಬೇರೆ ಸ್ಥಳಕ್ಕೆ ಒಯ್ಯುತ್ತ ಕಾಲ ಕಳೆಯಬಾರದು. ಒಯ್ಯಲೇಬೇಕಾದರೆ ಮೂಳೆ ಮುರಿದಿದೆಯೇ ನೋಡಿ ಮುರಿದಿದ್ದರೆ ಪಟ್ಟಿ ಹಾಕಿ ಕಟ್ಟಿದ ಬಳಿಕವೇ ಆದರೆ ಸಾಕಷ್ಟು ಶೀಘ್ರವಾಗಿಯೇ ಕ್ಷೇಮಸ್ಥಳಕ್ಕೆ ಒಯ್ಯಬೇಕು. ಸುಸ್ತುಧಕ್ಕೆಯಲ್ಲಿರುವ ವ್ಯಕ್ತಿಯನ್ನು ಕೂಡುವುದಕ್ಕಾಗಲಿ ಓಡಾಡುವುದಕ್ಕಾಗಲಿ ಬಿಡಬಾರದು. ತಲೆತಗ್ಗಿನಲ್ಲಿರುವಂತೆ ಮಲಗಿಸಿ ಕತ್ತನ್ನು ಪಕ್ಕಕ್ಕೆ ಹೊರಳಿಸಬೇಕು. ಬಟ್ಟೆಗಳನ್ನು ಸಡಿಲಿಸಿ ಗಾಳಿಹಾಕಬೇಕು. ವ್ಯಕ್ತಿಗೆ ಚಳಿ ಎನ್ನಿಸಿದರೆ ಬೆಚ್ಚಗೆ ಹೊದ್ದಿಸಬೇಕು. ಇಲ್ಲದಿದ್ದರೆ ಒಂದು ಮಗ್ಗುಲುಹಾಸಿಗೆಯನ್ನು (ಬೆಡ್‍ಶೀಟ್) ಹೊದ್ದಿಸಿದರೆ ಸಾಕು. ಭರವಸೆ ಮತ್ತು ಧ್ಯೆರ್ಯದ ಮಾತುಗಳನ್ನು ಹೇಳುತ್ತ ವ್ಯಕ್ತಿಯನ್ನು ಸಮಾಧಾನವಾಗಿ ಇಟ್ಟಿರಬೇಕು. ವ್ಯಕ್ತಿ ಇಚ್ಛೆಪಟ್ಟರೆ ಪಾನೀಯಗಳನ್ನು ಸ್ವಲ್ಪಸ್ವಲ್ಪ ಕೊಡಬಹುದು.

	4 ಜ್ಞಾನ ತಪ್ಪಿರುವಿಕೆ: ವ್ಯಕ್ತಿಗೆ ಜ್ಞಾನ ತಪ್ಪಿರುವ ಸಂದರ್ಭಗಳಲ್ಲಿ ಅದು ಅಪಸ್ಮಾರವೋ ಬೇರೆ ಸಂದರ್ಭವೋ ಎಂದು ಮೊದಲು ತಿಳಿದುಕೊಳ್ಳಬೇಕು. ಅದಿರುವಾಯುವೂ ಇರುವುದಾದ ಪಕ್ಷ ಆದು ಸಾಮಾನ್ಯವಾಗಿ ಅಪಸ್ಮಾರ ಪ್ರಸಂಗವೇ ಆಗಿರುತ್ತದೆ. ಅದೇ ಆಗಿದ್ದರೆ (ಬೇರೆ ಮಾಹಿತಿಗಳಿಂದ ರುಜುವಾತು ಮಾಡಿಕೊಳ್ಳತಕ್ಕದ್ದು) ವ್ಯಕ್ತಿಯನ್ನು ಅಂಗಾತ ಮಲಗಿಸಿ ಕತ್ತನ್ನು ಪಕ್ಕಕ್ಕೆ ಹೊರಳಿಸಿ ನಾಲಗೆಯನ್ನು ಹೊರಕ್ಕೆ ಎಳೆದು ಅದನ್ನು ವ್ಯಕ್ತಿ ಕಚ್ಚಿಕೊಂಡು ಗಾಯ ಮಾಡಿಕೊಳ್ಳದಂತೆ ಮೇಲಿನ ಹಾಗೂ ಕೆಳಗಿನದವಡೆ ಹಲ್ಲುಗಳ ನಡುವೆ ಕಡ್ಡಿಯಂಥ ಏನಾದರೂ ವಸ್ತುವನ್ನು ಇಟ್ಟಿದ್ದು ಕಾವಲು ಕಾಯ್ದುಕೊಂಡಿದ್ದರೆ ಸಾಕು. ಅದಿರುವಾಯು ಇಲ್ಲದೆ ಬರೇ ಜ್ಞಾನ ತಪ್ಪಿರುವ ಪ್ರಸಂಗಗಳಲ್ಲಿ ವ್ಯಕ್ತಿಯ ಮುಖ ಆರಕ್ತವಾಗಿದ್ದರೆ ತಲೆ ಎತ್ತರ ಮಟ್ಟದಲ್ಲೂ ಮುಖ ಬಿಳಿಚಿಕೊಂಡಿದ್ದರೆ ತಲೆ ತಗ್ಗಿನ ಮಟ್ಟದಲ್ಲೂ ಇರುವಂತೆ ವ್ಯಕ್ತಿಯನ್ನು ಅಂಗಾತ ಮಲಗಿಸಿ ಮುಖವನ್ನು ಪಕ್ಕಕ್ಕೆ ತಿರುಗಿಸಿ ನಾಲಗೆಯನ್ನು ಹೊರಕ್ಕೆ ಎಳೆದಿಡಬೇಕು. ಬಿಗಿ ಉಡುಪನ್ನು ಸಡಿಲಗೊಳಿಸಿ ಗಾಳಿ ಹಾಕಬೇಕು. ಜ್ಞಾನ ತಪ್ಪಿದ ವ್ಯಕ್ತಿಗೆ ಏನನ್ನಾದರೂ ಕುಡಿಸಿದ್ದೇ ಆದರೆ ಅದು ಅನ್ನನಾಳದ ಮೂಲಕ ಜಠರವನ್ನು ತಲಪುವ ಬದಲು ಶ್ವಾಸಮಾರ್ಗದ ಒಳಹೊಕ್ಕು ಉಸಿರು ಕಟ್ಟುವಂತೆ ಮಾಡಿ ಮಾರಕವಾಗಿ ಪರಿಣಮಿಸುತ್ತದೆ. ಆದರೆ ಇನ್ಸುಲಿನ್ನಿನ ಮಿತಿಮೀರಿದ ಕ್ರಿಯೆಯ ಸಂದರ್ಭದಲ್ಲಿ ಇದಕ್ಕೆ ವಿನಾಯಿತಿ ಇರುವುದನ್ನು ಮನಸ್ಸಿನಲ್ಲಿ ಇಟ್ಟಿರಬೇಕು.

	5 ಸುಟ್ಟಗಾಯ: ಉರಿ, ಕೆಂಡ, ಬಟ್ಟೆ ಹೊತ್ತಿಕೊಳ್ಳುವುದು ಮುಂತಾದವುಗಳಿಂದ, ಕಾದ ಎಣ್ಣೆ ಮೈಮೇಲೆ ಸಿಡಿಯುವುದು ಇಲ್ಲವೆ ಸುರಿಯುವುದರಿಂದ, ಹಾಗೂ ಕುದಿಯುವ ನೀರು ಬೀಳುವುದರಿಂದ ಸುಟ್ಟಗಾಯ ಉಂಟಾಗುತ್ತದೆ. ಸಲ್ಫೂರಿಕ್ ಆಮ್ಲ. ಕಾರ್ಬಾಲಿಕ್ ಆಮ್ಲ ಮುಂತಾದ ರಾಸಾಯನಿಕಗಳಿಂದಲೂ ವಿದ್ಯುದಾಘಾತಗಳಿಂದಲೂ (ಸಿಡಿಲು ಬಡಿಯುವುದು ಕೂಡ) ಸುಟ್ಟಗಾಯ ಆಗುತ್ತದೆ. ವ್ಯಕ್ತಿಯ ಬಟ್ಟೆ ಹೊತ್ತಿಕೊಂಡ ಸಂದರ್ಭದಲ್ಲಿ ತತ್‍ಕ್ಷಣವೇ ಆತನನ್ನು ನೆಲದಮೇಲೆ ಮಲಗಿಸಿ ಉರುಳಾಡಿಸಬೇಕು. ವ್ಯಕ್ತಿ ಓಡಿಹೋಗುವುದನ್ನು ಸರ್ವಥಾ ತಪ್ಪಿಸತಕ್ಕದ್ದು. ಸಾಧ್ಯವಾದರೆ ಬಟ್ಟೆಯನ್ನು ಕಿತ್ತುಹಾಕಬೇಕು. ಇಲ್ಲದಿದ್ದರೆ ವ್ಯಕ್ತಿಯ ಮೇಲೆ ಒಂದು ದಪ್ಪ ಕಂಬಳಿಯನ್ನು ಹಾಕಿ ಕಂಬಳಿ ಸುತ್ತಿಕೊಳ್ಳುವಂತೆ ಉರುಳಾಡುವ ಹಾಗೆ ಹೇಳಬೇಕು. ಉರಿಯುತ್ತಿರುವ ಬಟ್ಟೆಯನ್ನು ಈ ರೀತಿ ಆರಿಸಬೇಕೇ ವಿನಾ ನೀರು ಎರಚಿಯೋ ಬೇರೆ ಯಾವ ವಿಧಾನದಿಂದಲೋ ಆರಿಸುವುದಕ್ಕೆ ಹೋಗಲೇಬಾರದು. ಸುಟ್ಟಗಾಯದ ಮೇಲೆ ಎಣ್ಣೆ, ಬೆಣ್ಣೆ, ಜೇನು ತುಪ್ಪ ಇತ್ಯಾದಿಗಳನ್ನು ಬಳೆಯುವುದುಂಟು. ಆದರೆ ಹೀಗೆ ಮಾಡದಿರುವುದೇ ಒಳ್ಳೆಯದು. ಸುಟ್ಟಿರುವ ಸ್ಥಳವನ್ನು ಕ್ರಿಮಿವಿಮುಕ್ತ ಅಂದರೆ ಸ್ಟರಿಲೈಸ್ಡ್ ವಸ್ತ್ರದಿಂದ ಮುಚ್ಚಿ ವ್ಯಕ್ತಿಗೆ ಚಳಿ ಆಗದಂತೆ ಒಂದು ಮಗ್ಗಲು ಹಾಸಿಗೆಯನ್ನು ಹೊದಿಸುವುದು ವಾಸಿ. ಸುಟ್ಟಗಾಯದ ಮೇಲೆ ನೀರು ಹೀರುವಂಥ (ಅಬ್‍ಸಾರ್ಬೆಂಟ್) ಹತ್ತಿಯನ್ನು ಮುಚ್ಚಬಾರದು. ವ್ಯಕ್ತಿಗೆ ಕುಡಿಯಲು ಯಥೇಚ್ಛವಾಗಿ ಪಾನೀಯಗಳನ್ನು ಕೊಡಬೇಕು. ವ್ಯಕ್ತಿ ಸಾಮಾನ್ಯವಾಗಿ ಸುಸ್ತುಧಕ್ಕೆಯಲ್ಲಿರುವುದರಿಂದ ಅದಕ್ಕೆ ಚಿಕಿತ್ಸೆ ಮಾಡಬೇಕು.

	ವಿದ್ಯುದಾಘಾತದಲ್ಲಿ ಸಾಮಾನ್ಯವಾಗಿ ಸುಟ್ಟ ಗಾಯವಾಗಿರುವುದರಿಂದ ಮೇಲೆ ಹೇಳಿದ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ ಮೊತ್ತಮೊದಲ ಕ್ರಮವಾಗಿ ಪ್ರಥಮ ಚಿಕಿತ್ಸಕ ತಾನೇ ವಿದ್ಯುದಾಘಾತಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸಿ ವಿದ್ಯುತ್‍ಸಂಪರ್ಕವನ್ನು ಕಡಿದು ಹಾಕುವುದು ಮುಖ್ಯ. ಸ್ವಿಚ್ ಇಲ್ಲದಿರುವ ಕಡೆ ಮತ್ತು ಸ್ವಿಚ್ಚನು ನಂದಿಸಲು ಸಾಧ್ಯವಾಗದಿರುವ ಕಡೆ ಚಿಕಿತ್ಸಕ, ದಪ್ಪ ಹಾಗೂ ಚೆನ್ನಾಗಿ ಒಣಗಿದ ಮರ ಹಲಗೆಯ ಮೇಲೆ ನಿಂತು ಒಣಗಿದ ಬಿದಿರು ಕೋಲಿನಿಂದ ವಿದ್ಯುತ್ ತಂತಿಯನ್ನು ನೂಕಿ ಇಲ್ಲವೆ ಒಣಗಿದ ಬಟ್ಟೆಯ ಕುಣಿಕೆಯಿಂದ ವ್ಯಕ್ತಿಯನ್ನು ಹಿಡಿದು ಆಚೆ ಎಳೆದ ಸಂಪರ್ಕ ಕಡಿಯುವಂತೆ ಮಾಡಬಹುದು. ವ್ಯಕ್ತಿಯನ್ನೇ ಹಿಡಿದುಕೊಳ್ಳಬೇಕಾದುದು ಅಗತ್ಯವಾದರೆ ನೇರವಾಗಿ ಅವನ ಕೈಕಾಲುಗಳನ್ನು ಮುಟ್ಟದೆ ಒಣಗಿದ ಅವನ ಉಡುಗೆಯನ್ನು ಹಿಡಿದು ಎಳೆಯಬೇಕು.

	6 ಮೂಳೆಮುರಿತ: ನೋವು ಅಂಗಗಳು ಹಾಗೂ ವ್ಯಕ್ತಿತಳೆಯುವ ಭಂಗಿ ವಿಕೃತವಾಗಿರುವುದು ಮತ್ತು ಅಸಹಜ ಚಲನೆ ಇವುಗಳಿಂದ ಮೂಳೆ ಮುರಿದಿರುವುದನ್ನು ಪತ್ತೆ ಮಾಡಬಹು. ವ್ಯಕ್ತಿಯನ್ನು ಅಲುಗಾಡಿಸುವ ಮುನ್ನವೇ ಮೂಳೆ ಮುರಿದ ಸ್ಥಳಗಳಲ್ಲಿ ಪಟ್ಟಿಬಿಗಿದು ಚಲನೆ ಸಾಧ್ಯವಿಲ್ಲದಂತೆ ಬಂಧಿಸುವುದು ಯುಕ್ತ. ಕೇವಲ ಅನಿವಾರ್ಯ ಪ್ರಸಂಗಗಳಲ್ಲಿ ಇದಕ್ಕೆ ವಿನಾಯತಿ ಉಂಟು. ಆಗ ಹೀಗೆ ಮಾಡದೆ ವ್ಯಕ್ತಿಯನ್ನು ಕ್ಷೇಮಸ್ಥಳಕ್ಕೆ ಒಯ್ಯಬಹುದು, ಅದೂ ವಿಶೇಷ ಜಾಗರೂಕತೆ ವಹಿಸಿ. ಏಕೆಂದರೆ ಪಟ್ಟಿಬಿಗಿಯದೆ ಮೂಳೆ ಮುರಿದ ವ್ಯಕ್ತಿಯನ್ನು ಕ್ಷೇಮಸ್ಥಳಕ್ಕೆ ಒಯ್ಯುವುದರಿಂದ ವ್ಯಕ್ತಿಗೆ ಹೊಸ ಗಾಯಗಳಾಗುತ್ತವೆ. ರಕ್ತ ಸ್ರಾವ ಪ್ರಾರಂಭವಾಗುವುವು. ಅತೀವ ನೋವು ಉಂಟಾಗುವುವು. ಮತ್ತಿತರ ಗಹನ ಜಟಿಲತೆಗಳು ಪರಿಣಮಿಸುವುದು ಮುಂತಾದ ಅನನುಕೂಲತೆಗಳಾಗುತ್ತವೆ. ಪಟ್ಟಿಗೆ ಹತ್ತಿಯನ್ನೂ ಬಟ್ಟೆಯನ್ನೂ ಸುತ್ತಿ ಒತ್ತದಂತೆ ಮಾಡಿರಬೇಕು. ಬೆನ್ನುಮೊಳೆ ಮುರಿದಿರುವ ಪ್ರಸಂಗದಲ್ಲಿ ವ್ಯಕ್ತಿಯನ್ನು ಎಚ್ಚರಿಕೆಯಿಂದ ಉರುಳಿಸಿ ಅಂಗಾತ ಮಲಗಿಸಬೇಕು. ಎದ್ದು ಕೂರಿಸುವುದಾಗಲಿ ನಡೆಸಿಕೊಂಡು ಕ್ಷೇಮಸ್ಥಳಕ್ಕೆ ಒಯ್ಯುವುದಾಗಲಿ ಕೂಡದು. ವ್ಯಕ್ತಿಯ ತಲೆಕೆಳಗೆ ದಿಂಬು ಇಡಬಾರದು. ಬದಲು ಹಿತವಾಗಿರುವಂತೆ ಸೊಂಟದ ಕೆಳಗೆ ಹಾಗೂ ಅಲುಗಾಡದಂತೆ ಕುತ್ತಿಗೆಯ ಎರಡು ಪಕ್ಕಗಳಲ್ಲಿ ದಿಂಬುಗಳನ್ನು ಇಡುವುದು ಒಳ್ಳೆಯದು. ಮುಂದಿನ ಚಿಕಿತ್ಸೆ ವೈದ್ಯರಿಗೆ ಸೇರಿದ್ದು. ನಿತಂಬದಲ್ಲಿ ಇಲ್ಲವೆ ತೊಡೆಭಾಗದಲ್ಲಿ ಮೂಳೆ ಮುರಿದಿರುವಾಗ ಇಡಿಯಾಗಿ ಆ ಕಾಲನ್ನು ಚಲನೆ ಇಲ್ಲದಂತೆ ಪಟ್ಟಿ ಹಾಕಿ ಬಂಧಿಸಬೇಕು. ಇದಕ್ಕಾಗಿ ಪಟ್ಟಿ ಕಂಕುಳಿನಿಂದ ಪಾದದವರೆಗೂ ಇರುವಷ್ಟು ಉದ್ದವಾಗಿರಬೇಕು. ತಕ್ಕಷ್ಟು ಉದ್ದದ ಪಟ್ಟಿ ಲಭಿಸದಿದ್ದರೆ ಎರಡು ಕಾಲುಗಳನ್ನೂ ಜೋಡಿಯಾಗಿ ಸೇರಿಸಿ ಮೂರು ನಾಲ್ಕು ಕಡೆ ಕಟ್ಟಬೇಕು.

	ಅಪಘಾತಗಳ ಪರಿಣಾಮವಾಗಿ ಉಂಟಾದ ಗಾಯಗಳನ್ನು ಚಿಕಿತ್ಸಿಸುವಾಗ ಪ್ರಥಮ ಚಿಕಿತ್ಸಕ ತನ್ನ ಬರಿಕೈಗಳಿಂದ ಗಾಯಪ್ರದೇಶವನ್ನು ಮುಟ್ಟಬಾರದು. ಕುದಿಸಿ ಆರಿಸಿದ ಉಗುರು ಬೆಚ್ಚನೆ ನೀರನ್ನು ಸಮೃದ್ಧಿಯಾಗಿ ಗಾಯದ ಮೇಲೆ ಸುರಿದು ಸಲಭವಾಗಿ ನಿವಾರಿಸಬಹುದಾದ ಕಲ್ಮಷಗಳನ್ನು ತೆಗೆದುಹಾಕಬೇಕು. ಆಳವಾಗಿ ಹೊಕ್ಕಿಕೊಂಡಿರುವ ವಸ್ತುಗಳನ್ನು ಎಳೆದು ತೆಗೆಯುವುದಕ್ಕೆ ಹೋಗಬಾರದು. ಅನಂತರ ಕ್ರಿಮಿನಾಶಕ ದ್ರಾವಣವನ್ನು ಹಾಕಿ ವ್ಯಾಸಲಿನ್ ಬಳಿದ ಶುಭ್ರವಸ್ತ್ರದ ಚೂರನ್ನು ಗಾಯದ ಮೇಲೆ ಇಟ್ಟು ಅದರ ಮೇಲೆ ಹತ್ತಿ ಇಟ್ಟು ಬಂಧನಪಟ್ಟಿಯಿಂದ ಕಟ್ಟಬೇಕು. ಹತ್ತಿ, ಬಟ್ಟೆ ಇತ್ಯಾದಿಗಳನ್ನು ಕುದಿಯುವ ನೀರಿನಲ್ಲಿಟ್ಟು ಶುದ್ಧೀಕರಿಸಿದ ಚಿಮಟದಿಂದ ಹಿಡಿಯಬೇಕು.

	7 ವಿಷಪ್ರಯೋಗ: ಸಾಮಾನ್ಯವಾಗಿ ಪ್ರಯೋಗವಾಗುವ ವಿಷಗಳು ಚರ್ಮ ಹಾಗೂ ಲೋಳೆಪೊರೆಗಳನ್ನು ತಿಂದುಹಾಕುವಂಥವೊ ಬರಿ ಉರಿಯೂತ ಉಂಟು ಮಾಡುವಂಥವೂ ಇಲ್ಲವೆ ಗಾಢ ನಿದ್ರಾಕಾರಕಗಳಂಥವೋ ಆಗಿರುತ್ತವೆ. ಮೊದಲ ಬಗೆಯವು ಚಿಲಮುಗಳು (ಕರೊಸಿವ್ಸ್). ಆಮ್ಲಗಳು, ಪ್ರತ್ಯಾಮ್ಲಗಳು, ಕಾರ್ಬಾಲಿಕ್ ದ್ರಾವಕ ಮುಂತಾದವು ಈ ಗುಂಪಿಗೆ ಸೇರಿದವು. ವಿಷ ಯಾವುದೇ ಆಗಿದ್ದರೂ ಚಿಕಿತ್ಸೆಗೆ ಸಾಮಾನ್ಯವಾಗಿ ಅನುಸರಿಸತಕ್ಕ ಕ್ರಮಗಳು ಇವು: ಉಸಿರಾಟ ನಿಂತಿದ್ದರೆ ತತ್‍ಕ್ಷಣ ಕೃತಕ ಉಸಿರಾಟ ಪ್ರಾರಂಭಿಸುವುದು; ವಮನ ಏನಾದರೂ ಆಗಿದ್ದರೆ ಅದನ್ನು ಮುಂದಿನ ರಾಸಾಯನಿಕ ಪರೀಕ್ಷೆಗೆ ತೆಗೆದಿರಿಸುವುದು. ಹಾಗೆಯೇ ಹತ್ತಿರದಲ್ಲಿರುವ ಕಾಗದದ ಪೊಟ್ಟಣ. ಬಾಟಲಿಗಳು (ಖಾಲಿ ಆಗಿದ್ದರೂ) ಇವನ್ನು ಭದ್ರ ಮಾಡುವುದು.

	ತುಟಿಯಾಗಲಿ ಬಾಯಿಯಾಗಲಿ ಸುಟ್ಟಿರದ ಸಂದರ್ಭಗಳಲ್ಲಿ ಮಾತ್ರ ವಮನಕಾರಿಯನ್ನು ಕುಡಿಸಿ ವಮನ ಮಾಡಿಸಬೇಕು. ಒಂದು ಬಟ್ಟಲು ಬೆಚ್ಚನೆ ನೀರಿನಲ್ಲಿ ಎರಡು ದೊಡ್ಡ ಚಮಚ ಉಪ್ಪನ್ನು ವಿಲೀನಿಸಿ ಕುಡಿಸಿದರೆ ವಮನವಾಗುತ್ತದೆ. ಐದು ಮಿನಿಟುಗಳಲ್ಲಿ ವಮನ ಆಗದಿದ್ದರೆ ವ್ಯಕ್ತಿಯ ಬಾಯಿಗೆ ಬೆಟ್ಟು ಹಾಕಿ ಗಂಟಲನ್ನು ಕೆರೆದು ವಮನ ಮಾಡಿಸಬೇಕು. ಅನಂತರ ತುಪ್ಪ, ಎಣ್ಣೆ ಮುಂತಾದವನ್ನು ಬಾರ್ಲಿಗಂಜಿಗೆ ಸೇರಿಸಿಕೊಟ್ಟು ಸಂಕಟವನ್ನು ಶಮನ ಮಾಡಬಹುದು. ತುಟಿ ಅಥವಾ ಬಾಯಿ ಸುಟ್ಟಿದ್ದರೆ ಆಗ ವಮನ ಮಾಡಿಸಲೇಕೂಡದು. ಆಮ್ಲ ಪ್ರಯೋಗವಾಗಿದೆ ಎಂದು ತಿಳಿದುಬಂದರೆ ಸುಣ್ಣದ ತಿಳಿನೀರನ್ನು ಧಾರಾಳವಾಗಿ ಕುಡಿಸಬೇಕು. ಪ್ರತ್ಯಾಮ್ಲ ಪ್ರಯೋಗವಾಗಿದ್ದರೆ ಹುಣಿಸೆಹಣ್ಣಿನ ನೀರನ್ನೂ ಸರಿಸಮವಾಗಿ ನೀರು ಸೇರಿಸಿದ ನಿಂಬೆ ಅಥವಾ ಹೆರಳೆರಸವನ್ನೂ ಧಾರಾಳವಾಗಿ ಕುಡಿಸಬೇಕು. ಯಾವುದೂ ಸರಿಯಾಗಿ ತಿಳಿಯದ ಸಂದರ್ಭವಾಗಿದ್ದರೆ ಬರೀ ತಣ್ಣೀರನ್ನು ಸಮೃದ್ಧವಾಗಿ ಕುಡಿಸಬೇಕು. ತುಪ್ಪ, ಆಲಿವ್ ಎಣ್ಣೆ ಇವನ್ನು ಬಾರ್ಲಿಗಂಜಿಗೆ ಸೇರಿಸಿ ಕೊಡಬಹುದು. ಗಾಢ ನಿದ್ರಾಕಾರಕ ವಿಷಗಳ ಪ್ರಯೋಗವಾಗಿರುವಾಗ ವ್ಯಕ್ತಿಯನ್ನು ಬಲವಂತವಾಗಿ ಎಚ್ಚರಗೊಳಿಸಿ ಹಾಗೆಯೇ ಇರುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಮೈಮೇಲೆ ತಣ್ಣೀರೆರಚುತ್ತಿರಬೇಕಾದರೂ ಸರಿ. ವಮನ ಮಾಡಿಸುವ ವಿಷಯದಲ್ಲಿ ಎಚ್ಚರಿಕೆ ಇರಬೇಕು. ಏಕೆಂದರೆ ವ್ಯಕ್ತಿ ಮೈಮರೆತಿದ್ದಾಗ ವಮನ ಕೂಡದು. ಎಲ್ಲ ಸಂದರ್ಭಗಳಲ್ಲೂ ಮೊದಲ ಹಂತದ ಚಿಕಿತ್ಸೆ ಮುಗಿದ ಬಳಿಕ ಹಾಲು ಮತ್ತು ಮೊಟ್ಟೆಯನ್ನು ವಿಲೀನಿಸಿದ ನೀರು, ಗಂಜಿ ಮುಂತಾದವನ್ನು ಕೊಡಬಹುದು. ಸಂಗತಿಗಳನ್ನೆಲ್ಲ ತಪಶೀಲಾಗಿ ವೈದ್ಯರಿಗೆ ಹೇಳಿ ಕಳುಹಿಸಿ ಅವರು ಬಂದು ಚಿಕಿತ್ಸಾಭಾರವನ್ನು ಹೊರುವತನಕ ಈ ಕ್ರಮಗಳನ್ನು ಅನುಸರಿಸತಕ್ಕದ್ದು.

	8 ಜೇನು ಅಥವಾ ಕಣಜ ಕುಟುಕಿರುವ ಸಂದರ್ಭಗಳಲ್ಲಿ ಗಾಯವಾದ ಎಡೆಗಳಲ್ಲಿ ಅಂಟಿಕೊಂಡ ಕೊಂಡಿಗಳನ್ನು ಎಳೆದು ತೆಗೆಯಲು ಹೋಗಬಾರದು. ಬ್ಲೇಡಿನಿಂದ ಅವನ್ನು ಹೆರೆದು ಹಾಕುವುದು ವಾಸಿ. ಅನಂತರ ಕುಟುಕಿದ ಸ್ಥಳದಲ್ಲಿ ಸೋಡ ಇಲ್ಲವೆ ನವಸಾಗರ ಮತ್ತು ಸುಣ್ಣ ಇವನ್ನು ಹಚ್ಚಬಹುದು. ಮಂಜುಗೆಡ್ದೆಯನ್ನು ಇಟ್ಟರೂ ಆದೀತು. ಸಾಧಾರಣವಾಗಿ ಅಗತ್ಯ ಬೀಳುವ ಪ್ರಥಮ ಚಿಕಿತ್ಯಾ ಸಲಕರಣೆಗಳನ್ನೆಲ್ಲ ಒಂದು ಪೆಟ್ಟಿಗೆಯಲ್ಲಿ ಅಣಿ ಮಾಡಿ ತುರ್ತುವೇಳೆಯಲ್ಲಿ ಸಿದ್ದವಾಗಿರುವಂತೆ ಇಟ್ಟಿರುವುದು ರೂಢಿ. ಇಂಥ ತುರ್ತು ಪ್ರಥಮ ಚಿಕಿತ್ಸಾಪೆಟ್ಟಿಗೆಯನ್ನು ಬಸ್ಸುಗಳಲ್ಲಿ ಇಟ್ಟಿರುವುದುಂಟು. ಸಾರ್ವಜನಿಕ ಸ್ಥಳಗಳಲ್ಲಿ, ಪೊಲೀಸ್ ಠಾಣೆಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ಗಾರ್ಡ್‍ಗಾಡಿಗಳಲ್ಲಿ ಕೂಡ ಇವು ಸಾಮಾನ್ಯವಾಗಿ ಇರುತ್ತವೆ. ಇವೆಲ್ಲ ಸಣ್ಣ ಪೆಟ್ಟಿಗೆಗಳು. ಆದರೆ ನಿಜವಾಗಿ ಉಪಯುಕ್ತವಾಗುವ ಒಂದು ದೊಡ್ಡ ಪೆಟ್ಟಿಗೆಯಲ್ಲಿ ಇರಬೇಕಾದ ಸಾಮಾನುಗಳು ಇವು: 5 ಮತ್ತು 10 ಸೆಂಮೀ ಚೌಕದ ಜಾಲರಿ ಬಟ್ಟೆಗಳು; ಒಂದು ಮೀಟರ್ ಚೌಕದ ಇಂಥದೇ ಇಲ್ಲವೇ ಮಲ್ ಬಟ್ಟೆ, 21/2 ಸೆಂಮೀ ಅಗಲದ ಅಂಟುಪಟ್ಟಿಯ ಸುರುಳಿ; 5-7 ಸೆಂಮೀ ಅಗಲ ಮತ್ತು 30-80 ಸೆಂಮೀ ಉದ್ದದ ಮರದ ಪಟ್ಟಿಗಳು, ಶಿಗುರು ಇಲ್ಲವೆ ಹೆರೆದಿರುವ ಬಿದಿರು ಕಡ್ಡಿಗಳು; 21/2, 5 ಮತ್ತು 10 ಸೆಂಮೀ ಅಗಲದ ಬಂಧನ ಪಟ್ಟಿಯ ಸುರುಳಿಗಳು; ಹತ್ತಿಯ ಸುರುಳಿ, ಸಣ್ಣ ಮತ್ತು ದೊಡ್ಡ ಕತ್ತರಿ, ಚಿಮಟ ಒಂದು ದೊಡ್ಡ ಚಾಕು; ಕ್ಷೇಮಸೂಜಿಗಳು (ಸೇಫ್ಟಿಪಿನ್ಸ್) ಬಂಧಿಸುವುದಕ್ಕೆ ಹುರಿ ಮತ್ತು ಬಟ್ಟೆಪಟ್ಟೆಗಳು, ಕ್ರಿಮಿನಾಶಕ ದ್ರಾವಣಶೀಶೆ, ಉತ್ತೇಜಕ ಔಷಧದ ಶೀಶೆ ಮತ್ತು ನೋವುಶಾಮಕ ಗುಳಿಗೆಗಳು, ಕಂಬಳಿ ಮತ್ತು ಏಣಿ ಹತ್ತಿರದಲ್ಲಿ ಸಿಕ್ಕುವಂತಿರುವುದನ್ನೂ ಖಾತರಿ ಮಾಡಿಕೊಳ್ಳಬೇಕು.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ